ಯಲಬುರ್ಗ	
ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಮುಖ್ಯ ಕೇಂದ್ರ. ಈ ತಾಲ್ಲೂಕನ್ನು ದಕ್ಷಿಣದಲ್ಲಿ ಕೊಪ್ಪಳ, ಪೂರ್ವಕ್ಕೆ ಕುಷ್ಟಗಿ ಮತ್ತು ಗಂಗಾವತಿ ತಾಲ್ಲೂಕುಗಳು, ಪಶ್ಚಿಮ, ನೈಋತ್ಯ ಮತ್ತು ವಾಯುವ್ಯದಲ್ಲಿ ಧಾರವಾಡ ಜಿಲ್ಲೆಯ ರೋಣ ಹಾಗೂ ಗದಗ ತಾಲ್ಲೂಕುಗಳು, ಉತ್ತರಕ್ಕೆ ಕುಷ್ಟಗಿ ತಾಲ್ಲೂಕು ಸುತ್ತುವರೆದಿದೆ. ಬಾಂಡಿ, ಯಲಬುರ್ಗ ಮತ್ತು ಕುಕ್ಕನೂರು ಹೋಬಳಿಗಳು, ಈ ತಾಲ್ಲೂಕಿನ ಒಟ್ಟು ಗ್ರಾಮಗಳು 144. ವಿಸ್ತೀರ್ಣ 1,498 ಚ ಕಿಮೀ. ಈ ತಾಲ್ಲೂಕಿನ ಜನಸಂಖ್ಯೆ 2,35,263 (2001). ಪಟ್ಟಣದ ಜನಸಂಖ್ಯೆ 11,437 (2001). 

	ಜಿಲ್ಲೆಯ ಪಶ್ಚಿಮ ಭಾಗದ ಮೈದಾನ ಪ್ರದೇಶದಲ್ಲಿರುವ ಈ ತಾಲ್ಲೂಕಿನ ಹೆಚ್ಚು ಪ್ರದೇಶ ಕಪ್ಪು ಮಣ್ಣಿನ ಎರೆ ಭೂಮಿಯಿಂದ ಕೂಡಿದೆ. ಈ ತಾಲ್ಲೂಕಿನ ವಾಯುವ್ಯದಿಂದ ಆಗ್ನೇಯಕ್ಕೆ ಹರಿಯುವ ಒಂದು ದೊಡ್ಡ ತೊರೆ ಪಶ್ಚಿಮದಿಂದ ಹರಿವ ಮತ್ತೆರಡು ಪುಟ್ಟ ತೊರೆಗಳನ್ನು ಕೂಡಿಕೊಂಡು ತುಂಗಭದ್ರಾ ನದಿಯನ್ನು ಸೇರುತ್ತದೆ. ತಾಲ್ಲೂಕಿನ ಸರಾಸರಿ ಮಳೆ 620ಮಿಮೀ. ಜಿಲ್ಲೆಯ ಇತರ ತಾಲ್ಲೂಕುಗಳಿಗಿಂತ ಈ ತಾಲ್ಲೂಕಿನಲ್ಲಿ ಹೆಚ್ಚು ಮಳೆ ಬೀಳುತ್ತದೆ. ಇಲ್ಲಿನ ವ್ಯವಸಾಯ ಕೆರೆ, ಬಾವಿ ಮತ್ತು ಮಳೆಯನ್ನವಂಬಿಸಿದೆ. ಜೋಳ, ಗೋಧಿ, ಸೇಂಗಾ, ಸಜ್ಜೆ, ಬತ್ತ, ತೊಗರಿ ಈ ತಾಲ್ಲೂಕಿನ ಮುಖ್ಯ ಬೆಳೆಗಳು. ಇವುಗಳ ಜೊತೆಯಲ್ಲಿ ಹತ್ತಿ, ಹರಳುಬೀಜ, ಸ್ವಲ್ಪ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಾರೆ. 

	ವ್ಯವಸಾಯ ಪ್ರಧಾನವಾದ ಈ ತಾಲ್ಲೂಕಿನಲ್ಲಿ ಕೈಗಾರಿಕೆಗಳು ಕಡಿಮೆ. ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನೆರವು ಪಡೆದ ಗ್ರಾಮಗಳಲ್ಲಿ ಎಣ್ಣೆ, ಚರ್ಮ, ಹಗ್ಗ ಮತ್ತು ಮರಗೆಲಸದ ಕೆಲವು ಸಹಕಾರ ಸಂಘಗಳು ಕೆಲಸ ಮಾಡುತ್ತಿವೆ. ಹತ್ತಿ ಸಂಸ್ಕರಣದ 16 ಕಾರ್ಖಾನೆಗಳೂ 2 ಎಣ್ಣೆ ಮಿಲ್ಲುಗಳೂ ಒಂದು ಮರ ಕೊಯ್ಯುವ ಕಾರ್ಖಾನೆ ಮತ್ತು ಒಂದು ಚರ್ಮ ವಸ್ತುಗಳ ಉತ್ಪಾದನಾ ಕೇಂದ್ರ ಈ ತಾಲ್ಲೂಕಿನಲ್ಲಿವೆ. ರಾಷ್ಟ್ರೀಯ ಹೆದ್ದಾರಿ ಈ ತಾಲ್ಲೂಕಿನ ಪೂರ್ವಭಾಗದಲ್ಲಿ ಕೊಪ್ಪಳ ಮತ್ತು ಕುಷ್ಟಗಿ ತಾಲ್ಲೂಕುಗಳನ್ನು ಸೇರಿಸಿದಂತೆ ಹಾದುಹೋಗಿದೆ. ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳೂ ಈ ತಾಲ್ಲೂಕಿನಲ್ಲಿ ಹಾದು ಹೋಗಿರುವುದಲ್ಲದೆ ಹುಬ್ಬಳ್ಳಿ-ಬಳ್ಳಾರಿ ರೈಲ್ವೆ ಮಾರ್ಗ ಈ ತಾಲ್ಲೂಕಿನ ದಕ್ಷಿಣದಲ್ಲಿ ಹಾದು ಹೋಗಿದ್ದು ವ್ಯಾಪಾರಿ ವಾಣಿಜ್ಯ ಪ್ರಗತಿಗೆ ಸಹಾಯಕವಾಗಿದೆ. 

	ಯಲುಬುರ್ಗ ತಾಲ್ಲೂಕಿನಲ್ಲಿ ತಾಲ್ಲೂಕು ಮಟ್ಟದ ಸರ್ಕಾರಿ ಸಾರ್ವಜನಿಕ ಔಷಧಾಲಯಗಳೂ ಮಂಗಳೂರು ಮತ್ತು ಕುಕ್ಕನೂರುಗಳಲ್ಲಿ ಆರೋಗ್ಯ ಕೇಂದ್ರಗಳೂ ಇವೆ. 

	ಈ ತಾಲ್ಲೂಕಿನ ಮಂಗಳೂರಿನ ಮಂಗಳೇಶ್ವರ ಜಾತ್ರ ಪ್ರಸಿದ್ಧವಾದದ್ದು. ಇಟಗಿ ಗ್ರಾಮದಲ್ಲಿರುವ ಮಹದೇವ ದೇವಾಲಯ ಸುಂದರ ವಾಸ್ತುಕೃತಿ. ಯಲಬುರ್ಗದ ದಕ್ಷಿಣಕ್ಕಿರುವ ಕುಕ್ಕನೂರು ಹಿಂದೆ ಕುಂತಲಪುರವಾಗಿತ್ತೆಂದು ಹೇಳಲಾಗಿದೆ. ಇಲ್ಲಿ ಚಾಳುಕ್ಯ ಶೈಲಿಯ ಅನೇಕದೇವಾಲಯ ಮತ್ತು ಕಟ್ಟಡಗಳ ಅವಶೇಷಗಳಿವೆ. 

	ಯಲಬುರ್ಗ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ರಾಯಚೂರಿನ ನೈಋತ್ಯಕ್ಕೆ ಈ ಊರಿದೆ. 

	ಐತಿಹಾಸಿಕವಾಗಿ ಇದರ ಹಳೆಯ ಹೆಸರು ಎರಂಬರ್ಗ. 11-12ನೆಯ ಶತಮಾನಗಳಲ್ಲಿ ಸಿಂದ ಮನೆತನದವರು ಇದರ ಸುತ್ತಲಿನ ಪ್ರದೇಶವನ್ನು ಆಳುತ್ತಿದ್ದರು. ಆ ವಂಶದ ಅರಸನ ವಿಷಯವನ್ನು ಉಲ್ಲೇಖಿಸಿರುವ ಕಲ್ಯಾಣ ಚಾಳುಕ್ಯ ಆರನೆಯ ವಿಕ್ರಮಾದಿತ್ಯನ ಶಾಸನವೊಂದು ಇಲ್ಲಿದೆ. ಊರ ಹೊರಗಿರುವ ಪಾಳು ಬಿದ್ದಿರುವ ಒಂದು ಕಲ್ಲಿನ ಮಂಟಪ ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಈಶ್ವರ ದೇವಾಲಯವಾಗಿತ್ತೆಂದು ಪ್ರತೀತಿ. 

	ಇಲ್ಲಿ ಪ್ರೌಢಶಾಲೆ, ವಿದ್ಯುಚ್ಛಕ್ತಿ, ಅಂಚೆ, ತಂತಿ, ದೂರವಾಣಿ ಸೌಕರ್ಯಗಳಿವೆ. ಸಾರ್ವಜನಿಕ ಆಸ್ಪತ್ರೆ, ಪಶುವೈದ್ಯಾಲಯಗಳುಂಟು. ಇಲ್ಲಿ ಪ್ರತಿವರ್ಷ ಬಸವಜಯಂತಿ ಸಂದರ್ಭದಲ್ಲಿ ಐದು ದಿನಗಳ ಜಾತ್ರೆ ನಡೆಯುತ್ತದೆ. ಈ ಊರು ಕಂಬಳಿ ನೇಯ್ಗೆಗೆ ಪ್ರಸಿದ್ಧ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ